ಅಕ್ಷರ ಕೆ.ವಿ.
ದೆಹಲಿಯ ರಾಷ್ಟ್ರೀಯ ನಾಟಕಶಾಲೆ ಮತ್ತು ಇಂಗ್ಲೆಂಡಿನ ಲೀಡ್ಸ್ ವಿಶ್ವವಿದ್ಯಾಲಯಗಳಿಂದ ಪದವಿ ಪಡೆದ ಅಕ್ಷರ ಕೆ.ವಿ. ನೀನಾಸಮ್ ಮತ್ತು ಅಕ್ಷರ ಪ್ರಕಾಶನ ಸಂಸ್ಥೆಗಳ ಮೂಲಕ ಕೆಲಸ ಮಾಡುತ್ತಿದ್ದಾರೆ; ಕರ್ನಾಟಕದ ವಿವಿಧೆಡೆ ರಂಗಶಿಬಿರ ನಡೆಸಿ ‘ಬೇಕಾಬಿಟ್ಟಿ ಸಂಗೀತ ನಾಟಕ’, ‘ಆಷಾಢದ ಒಂದು ದಿನ’ ಮೊದಲಾದ ನಾಟಕಗಳನ್ನು ನಿರ್ದೇಶಿಸಿದ್ದಾರೆ. ನೀನಾಸಮ್ ತಿರುಗಾಟದಲ್ಲಿ ‘ಚಿದಂಬರ ರಹಸ್ಯ’, ‘ಸಂಗ್ಯಾ ಬಾಳ್ಯಾ’, ‘ಹೊಸ ಸಂಸಾರ’, ‘ಶ್ಮಶಾನ ಕುರುಕ್ಷೇತ್ರಂ’, ‘ವೆನಿಸ್ಸಿನ ವ್ಯಾಪಾರ’ ಮೊದಲಾದ ಹಲವಾರು ನಾಟಕಗಳನ್ನು ನಿರ್ದೇಶಿಸಿದ್ದಾರೆ. ರಂಗ ಇತಿಹಾಸದ ಬಗ್ಗೆ ಇವರು ರಚಿಸಿದ ‘ರಂಗ ಪ್ರಪಂಚ’ ಪುಸ್ತಕಕ್ಕೆ ಮತ್ತು ನಾಟಕ ‘ಸಹ್ಯಾದ್ರಿ ಕಾಂಡ’ಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ದೊರಕಿದೆ. ‘ಮಾವಿನ ಮರದಲ್ಲಿ ಬಾಳೆಯ ಹಣ್ಣು’ ಎಂಬ ರಂಗವಿಮರ್ಶಾ ಸಂಕಲನ, ‘ರಂಗಭೂಮಿಯ ಮುಖಾಂತರ’, ‘ಅಂತಃಪಠ್ಯ ಮತ್ತು ಇತರ ಪ್ರಬಂಧಗಳು’ ಎಂಬ ಲೇಖನ ಸಂಕಲನಗಳು, ‘ಚೂರಿಕಟ್ಟೆ ಅರ್ಥಾತ್ ಕಲ್ಯಾಣಪುರ’, ‘ಸ್ವಯಂವರಲೋಕ’, ‘ಭಾರತಯಾತ್ರೆ’ ಎಂಬ ನಾಟಕಗಳು -- ಇವರ ಇನ್ನಿತರ ಪ್ರಮುಖ ಕೃತಿಗಳು.