ಬಿ ಸುರೇಶ
ದಾವಣಗೆರೆ ಇವರ ಹುಟ್ಟೂರು. ಸುರೇಶ ಅವರು, ಕನ್ನಡದ ಪ್ರಸಿದ್ಧ ಪತ್ರಕರ್ತೆ ಹಾಗೂ ನಾಟಕಗಾರ್ತಿಯೂ ಆಗಿರುವ ವಿಜಯಮ್ಮನವರ ಪುತ್ರರು. ೧೯೭೩ರಿಂದಲೇ ಬಾಲನಟನಾಗಿ ಹವ್ಯಾಸೀ ರಂಗಭೂಮಿಯಲ್ಲಿ ಕಾಣಿಸಿಕೊಂಡ ಇವರು ಈವರೆವಿಗೂ ಸಕ್ರಿಯ ರಂಗಕರ್ಮಿಯಾಗಿದ್ದಾರೆ. ಕಿರುತೆರೆಯ ಕಲಾವಿದರು ತಂತ್ರಜ್ಞರು ಕಾರ್ಮಿಕರ ಸಂಘದ ನಿಕಟಪೂರ್ವ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಸುರೇಶ್ ಅವರು ಪ್ರಸ್ತುತ ಬೆಂಗಳೂರಿನ ಪೌರ ಕಾರ್ಮಿಕರ ಸಂಘದ ಸಲಹೆಗಾರ. ೨೦೦೮ ಡಿಸೆಂಬರ್ ತಿಂಗಳಿನಿಂದ ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸದಸ್ಯರಾಗಿದ್ದಾರೆ. ರಂಗಭೂಮಿ, ಕಿರುತೆರೆ ಮತ್ತು ಹಿರಿತೆರೆಗಳಲ್ಲಿ ಕ್ರಿಯಾಶೀಲರಾಗಿ ಮುಂದುವರೆದಿರುವರು.
ಅವರು ಕನ್ನಡ ಕಿರುತೆರೆಯ ನಿರ್ದೇಶಕರಲ್ಲೊಬ್ಬರು. ಹದಿನೈದು ನಾಟಕಗಳನ್ನು ಈವರೆಗೆ ಬರೆದಿದ್ದಾರೆ. ಶೇಕ್ಸ್ಪಿಯರನ ಮ್ಯಾಕ್ಬೆತ್, ಕಿಂಗ್ಲಿಯರ್ ನಾಟಕಗಳನ್ನೂ ಒಳಗೊಂಡಂತೆ ೨೫ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಬಿ.ಸುರೇಶ ಅವರು ಬರೆದ ಷಾಪುರದ ಸೀನಿಂಗಿ-ಸತ್ಯ ನಾಟಕವು ೧೯೯೭ರಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದುಕೊಂಡಿದೆ.