ಡಾ. ಗೋವಿಂದ ಪ್ರಹ್ಲಾದ ಭಾಗೋಜಿ
ನಿವೃತ್ತನಾಗಿ ೪-೫ ವರುಷದ ನಂತರ ನನ್ನ ಗತ ಜೀವನವನ್ನು ತಿರುಗಿ ನೋಡಲಾರಂಭಿಸಿದೆ. ನನ್ನ ಕೆಲಸ ಕಾರ್ಯದಲ್ಲಿ ನಾನು ಸಾಧಿಸಿದ್ದಾದರೂ ಏನು ಎಂದು ಚಿಂತೆ ಕಾಡಿಸಹತ್ತಿತು. ಅದರ ರೂಪವಾಗಿ ಈ ಬರಹವನ್ನು ಬರೆಯಬೇಕೆಂದು ಇಚ್ಛೆಯಾಯಿತು. ಅದು ರೂಪುಗೊಳ್ಳಲು ಸುಮಾರು ೧ ೦ ವರುಷ ಹತ್ತಿದವು. ಹಸ್ತಪ್ರತಿ ತಯಾರಾದನಂತರ ಮತ್ತೆ ೪-೫ ವರುಷ ಕಳೆದವು. ಒಬ್ಬ ಪಶು ಚಿಕಿತ್ಸಕ ಪದವೀಧರ ಪಶುಪಾಲನೆಯ ಕೆಲಸದಲ್ಲಿ ಆಸಕ್ತಿ ತೋರಿಸುವುದಿಲ್ಲ. ನನಗೂ ಹೀಗೆಯೇ ಅನಿಸುತ್ತಿತ್ತು. ಆದರೆ ನನ್ನ ದೈವವೇ ನನ್ನನ್ನು ಕೇವಲ ಪಶುಪಾಲನೆಯ ಕೆಲಸಕ್ಕಾಗಿ ಎಳೆದುಕೊಂಡು ಹೋಯಿತು. ಕೇವಲ ನನ್ನ ನೌಕರಿಯ ೬ ವರ್ಷವಷ್ಟೇ ಪಶುಚಿಕಿತ್ಸೆಯ ಕೆಲಸದಲ್ಲಿದ್ದೆ. ಉಳಿದೆಲ್ಲ ೩೦-೩೧ ವರುಷ ಪಶುಪಾಲನೆಯಲ್ಲಿಯೇ ತೊಡಗಬೇಕಾಯಿತು. ಇದು ನಾನು ಬಯಸಿದ್ದಲ್ಲ , ತಾನಾಗಿಯೇ ಇದಕ್ಕೆ ನೂಕಲ್ಪಟ್ಟವನು. ಇದರಿಂದ ನನಗೇನೂ ಅಸಮಾಧಾನವಿಲ್ಲ. ಪಶುಪಾಲನೆಯಲ್ಲಿಯೇ ಪೋ. ಗ್ರಾಜ್ಯುಯೇಟ್ ಮತ್ತು ಡಾಕ್ಟರೇಟ್ ಪದವಿಯನ್ನೂ ಸಹ ಪಡೆದುಕೊಂಡೆ. ಈ ವೃತ್ತಿಯಲ್ಲಿ ಸಮಾಧಾನವನ್ನು ಮತ್ತು ಯಶಸ್ಸನ್ನು ಕಂಡುಕೊಂಡೆ. ಈ ಕೆಲಸದಲ್ಲಿ ನನಗೆ ಪ್ರೋತ್ಸಾಹವನ್ನು ಕೊಟ್ಟವರು ಮತ್ತು ದೇವರಂತೆ ನನಗೆ ಸಹಾಯ ಮಾಡಿದ ಶ್ರೀ ರತಿಭಾಯಿ ಅಂಧಾರಿಯಾ ಅವರಿಗೆ ನಾನು ಚಿರಋಣಿ.