ಡಾ. ಎಚ್ ಎಲ್ ಪುಷ್ಪ
ವಿಜ್ಞಾನದಲ್ಲಿ ಪದವಿ ಶಿಕ್ಷಣ, ಕನ್ನಡದಲ್ಲಿ ಸ್ನಾತಕೋತ್ತರ ಪದವಿಯ ನಂತರ ರಾಜ್ಯದ ವಿವಿಧೆಡೆ ಕನ್ನಡ ಉಪನ್ಯಾಸಕಿಯಾಗಿ ಸೇವೆ. ಪ್ರಸ್ತುತ ಬೆಂಗಳೂರಿನ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಉದ್ಯೋಗ. ‘ಅಮೃತಮತಿ ಸ್ವಗತ’ ಕಾವ್ಯ ಸಂಕಲನದಿಂದ ಹೆಸರಾದ ಎಚ್ ಎಲ್ ಪುಷ್ಪ ಅವರಿಗೆ ಒರಿಸ್ಸಾದ ‘ಉದಯ ಭಾರತಿ ರಾಷ್ಟ್ರೀಯ ಪುರಸ್ಕಾರ’ ಒಳಗೊಂಡಂತೆ ಹಲವು ಪ್ರಶಸ್ತಿಗಳು ಸಂದಿವೆ. ‘ಗಾಜುಗೋಳ’ ಸಂಕಲನಕ್ಕೆ ಮಹತ್ವದ ಡಾ. ಪು.ತಿ.ನ ಪುರಸ್ಕಾರ, ಡಾ. ಕಡೆಂ ಗೋಡ್ಲು ಶಂಕರಭಟ್ಟ ಪ್ರಶಸ್ತಿ ಒಳಗೊಂಡಂತೆ ಹಲವು ಪ್ರಶಸ್ತಿಗಳು ಲಭಿಸಿವೆ. ‘ಭೂಮಿ ಯಲ್ಲ ಇವಳು’ ಎನ್ನುವ ನಾಟಕಕ್ಕೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಮೂರನೆಯ ಸಂಕಲನವಾದ ‘ಲೋಕದ ಕಣ್ಣು’ಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ದಿನಕರ ದೇಸಾಯಿ ಕಾವ್ಯ ಪುರಸ್ಕಾರಗಳು ಸಂದಿವೆ. ದೆಹಲಿ, ಸಿಕ್ಕಿಂ, ಭುವನೇಶ್ವರಗಳಲ್ಲಿ ನಡೆದ ರಾಷ್ಟ್ರೀಯ ಕವಿಗೋಷ್ಠಿಗಳಲ್ಲಿ ಪಾಲ್ಗೊಂಡ ಪುಷ್ಪ, ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ‘ಆಧುನಿಕ ಕನ್ನಡ ನಾಟಕಗಳಲ್ಲಿ ಮೈಮನಸ್ಸುಗಳ ಸಂಬಂಧ’ ಕುರಿತು ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಕಾವ್ಯಾಸಕ್ತಿಯ ಜೊತೆಗೆ ನಾಟಕ ರಚನೆ, ವಿಮರ್ಶೆ ಇವರ ಇತರ ಆಸಕ್ತ ಕ್ಷೇತ್ರಗಳು. ‘ಅನ್ವೇಷಣೆ’ ಸಾಹಿತ್ಯ ಪತ್ರಿಕೆಯ ಗೌರವ ಸಂಪಾದಕಿಯಾಗಿದ್ದಾರೆ.