ಡಾ. ಜಯಶ್ರೀ ಎಸ್. ಮುದಿಗೌಡರ
ಡಾ. ಜಯಶ್ರೀ ೧೯೭೧ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ನಿಯುಕ್ತಿಗೊಂಡು ೩೭ ವರ್ಷಗಳ ಸಾರ್ಥಕ ಸೇವೆಗೈದು ಶಿಕ್ಷಕ ವೃತ್ತಿಯಿಂದ ನಿವೃತ್ತರಾದರೂ ಪ್ರವೃತ್ತಿಯಿಂದ ಕ್ರಿಯಾಶೀಲರಾಗಿಯೇ ಇದ್ದಾರೆ. ವಿದ್ಯಾರ್ಥಿ ದೆಸೆಯಲ್ಲಿರುವಾಗ ವೈದ್ಯೆಯಾಗಿ ಸಾರ್ವಜನಿಕ ಸೇವೆ ಸಲ್ಲಿಸುವ ಕನಸು ಕಂಡಿದ್ದ ಅವರು, ಇಂದು ಭಾಷಾಭಿವೃದ್ಧಿಯ ವೈದ್ಯೆಯಾಗಿ ಮಕ್ಕಳ ಶೈಕ್ಷಣಿಕ ಸುಭದ್ರ ಅಡಿಪಾಯ ಕೇಂದ್ರದ ಮೂಲಕ ಮಕ್ಕಳ ಕನ್ನಡ ಭಾಷೆಯ ನೆಲೆಗಟ್ಟನ್ನು ಭದ್ರಪಡಿಸುವ ನಿಟ್ಟಿನಲ್ಲಿ ಎಲೆಮರೆಯ ಹೂವಾಗಿ ಯಾವುದೇ ಫಲಾಪೇಕ್ಷೆ ಇಲ್ಲದೇ ಮಕ್ಕಳಿಗೆ ಮತ್ತು ಪಾಲಕರಿಗೆ ಉಚಿತವಾಗಿ ಸಲಹೆ, ಮನೆಪಾಠ, ತರಬೇತಿ ನೀಡುತ್ತ ತಮ್ಮ ಅಂದಿನ ಕನಸನ್ನು ನಿವೃತ್ತ ವಿಶ್ರಾಂತ ಜೀವನದಲ್ಲಿ ನನಸಾಗಿಸಿ ಕೊಂಡಿದ್ದಾರೆ. ಮಕ್ಕಳು ಮತ್ತು ಪಾಲಕರಿಗೆ ಉಪಯುಕ್ತವಾಗುವ “ಪಾಲಕರಿಗಾಗಿ”, “ಸುವಿಚಾರ ಸಿಂಚನ”, “ಕನ್ನಡ ಭಾಷಾ ನೆಲೆಗಟ್ಟು”, “ಚಿಣ್ಣರ ಕನ್ನಡ ಕ್ರೀಡೆಗಳು” ಎಂಬ ನಾಲ್ಕು ಸರಳ, ಚಿಕ್ಕ, ಚೊಕ್ಕ ಕೃತಿಗಳನ್ನು ರಚಿಸಿರುವ ಅವರು ಇದೀಗ “ಕನ್ನಡ ವ್ಯಾಕರಣ” ಎನ್ನುವ ಮಹತ್ವದ ಕೃತಿಯನ್ನು ಮಕ್ಕಳ ಕೈಗೆ ನೀಡುತ್ತಿದ್ದಾರೆ. ಐದರಿಂದ ಹತ್ತನೇ ತರಗತಿಯ ಪಠ್ಯಗಳನ್ನು ಆಧರಿಸಿ ವ್ಯಾಕರಣದ ಅಕ್ಷರ, ನಾಮ, ಸಂಧಿ, ಸಮಾಸ, ತತ್ಸಮ-ತದ್ಭವ, ಹಾಗೂ ಆಖ್ಯಾತ ಪ್ರಕರಣಗಳ ಮುಖ್ಯಾಂಶಗಳನ್ನು, ಉದಾಹರಣೆಗಳ ಸಹಿತ ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತೆ ವಿವರಿಸ...