ಡಾ. ಕೃಷ್ಣ ಕಟ್ಟಿ
ಇದ್ದದ್ದನ್ನು ಇದ್ದಂತೆ ದಾರ್ಷ್ಟ್ಯ ಇರುವ ಕೃಷ್ಣಾ ತೀರದ ಅಗ್ರಹಾರದ ತೀಕ್ಷ್ಣಮತಿ ಡಾ. ಕೃಷ್ಣ ಕಟ್ಟಿ. ಬುದ್ಧಿವಂತ, ಮೊನಚು ಮಾತುಗಾರಿಕೆಯ ವ್ಯಕ್ತಿ. ಸದಾ ಚಟುವಟಿಕೆಯಿಂದಿರುವ ಸಹೃದಯಿ. ತನ್ನ ವಿಸ್ತೃತ ಅನುಭವದ ತಳಹದಿಯಲ್ಲಿ ಇನ್ನೊಬ್ಬರಿಗೆ ಬದುಕು ಕಟ್ಟಿಕೊಡುತ್ತಾ ಬದುಕಿನ ಗೂಡಾರ್ಥ ಅರಿತ ವಿಶಾಲ ಮನಸ್ಸಿನವರು.
ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ, ಪ್ರಪ್ರಥಮ ಪಿ.ಹೆಚ್.ಡಿ ಪಡೆದ ಹೆಗ್ಗಳಿಕೆ ಇವರದು. ಸದ್ಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಂಸ್ಕೃತಿ , ಸಾಹಿತ್ಯ, ಕಾವ್ಯ, ಭಕ್ತಿ ಪಂಥದ ವಿಷಯವಾಗಿ ವಿಮರ್ಶಾತ್ಮಕ ಲೇಖನ ಬರೆಯುವ ಕಟ್ಟಿಯವರು, ಸುಧಾ ವಾರ ಪತ್ರಿಕೆಯಲ್ಲಿ ಮೂರು ವರ್ಷಗಳ ಕಾಲ ಸಮಕ್ಷಮ ಅಂಕಣ ಬರೆದವರು. ಆಕಾಶವಾಣಿಯಲ್ಲಿ ಸುದ್ದಿವಾಚಕ, ಉದ್ಘೋಷಕ, ನಟ-ನಾಟಕಕಾರ ಮತ್ತು ಶಿಕ್ಷಣ ತಜ್ಞರಾಗಿ ಕೆಲಸ ಮಾಡಿದವರು. ರಂಗಭೂಮಿಯಲ್ಲಿಯೂ ಸಹಿತ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡವರು. ಬೇಂದ್ರೆ ಇವರ ಒಲವಿನ ಕವಿ. ಬೇಂದ್ರೆ ಸಾಹಿತ್ಯದ ತಿರುಳನ್ನು ವಿಶೇಷ ಬೆಳಕಿನಲ್ಲಿ ಉಣ ಬಡಿಸುವಲ್ಲಿ ನಿಷ್ಣಾತರು.