ಮೋಹನ ಕುಂಟಾರ್
ಹುಟ್ಟಿದ್ದು ಕೇರಳದ ಕಾಸರಗೋಡಿನ ಕುಂಟಾರು. ಅಲ್ಲಿಯೇ ಪ್ರಾಥಮಿಕ ವಿದ್ಯಾಭ್ಯಾಸ. ಕ್ಯಾಲಿಕಟ್ ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ(೧೯೮೭). ಮದುರೈ ಕಾಮರಾಜ ವಿಶ್ವವಿದ್ಯಾಲಯದಿಂದ ಎಂ.ಫಿಲ್(೧೯೮೮) ಮತ್ತು ಪಿಎಚ್.ಡಿ(೧೯೯೩) ಪದವಿ. ೧೯೯೨ರಿಂದ ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಭಾಷಾಂತರ ಅಧ್ಯಯನ ವಿಭಾಗದಲ್ಲಿ ಸಂಶೋಧನ ಸಹಾಯಕ. ೧೯೯೪ರಿಂದ ಉಪನ್ಯಾಸಕ. ೧೯೯೭ರಿಂದ ಪ್ರವಾಚಕ. ೨೦೦೬ರಿಂದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ೨೦೦೧ ರಿಂದ ೨೦೦೫ ರವರೆಗೆ ಕನ್ನಡ ವಿಶ್ವವಿದ್ಯಾಲಯದಲ್ಲಿ ದೂರಶಿಕ್ಷಣ ಕೇಂದ್ರದ ಸಂಯೋಜನಾಧಿಕಾರಿ. ೨೦೦೮-೨೦೧೦ರ ಪ್ರಸಾರಾಂಗದ ನಿರ್ದೇಶಕರು. ‘ಯಕ್ಷಗಾನ ವಾಚಿಕಾಧ್ಯಯನ’, ‘ಯಕ್ಷಗಾನ ಆಹಾರ್ಯ’ ಕೃತಿಗಳು ಸಂಶೋಧನ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ. ಕೇರಳದ ಸಾಂಸ್ಕೃತಿಕ ಇತಿಹಾಸವನ್ನು ಕುರಿತ ಅಧ್ಯಯನ ಗ್ರಂಥ ‘ಕೇರಳ ಕಥನ’ ಗಮನಾರ್ಹ ಕೃತಿ. ಮಲಯಾಳಂನಿಂದ ಅನೇಕ ಕತೆ, ಕಾದಂಬರಿಗಳ ಅನುವಾದ. ವಾಸುದೇವನ್ ನಾಯರ್ ಕತೆಗಳು, ಬಶೀರ್ ಕತೆಗಳು, ತಗಳಿ ಶಿವಶಂಕರ ಪಿಳ್ಳೆಯವರ ಕಾದಂಬರಿಯ ಅನುವಾದ ‘ತೋಟಿಯ ಮಗ’, ಉರೂಬ್ ಅವರ ಕಾದಂಬರಿ ಅನುವಾದ ‘ಸುಂದರರು ಸುಂದರಿಯರು’ ಇತ್ಯಾದಿಗಳು ಪ್ರಮುಖ ಅನುವಾದಗಳು.
ಕರ್ನಾಟಕ ಸಾಹಿತ್ಯ ಅಕಾಡೆಮಿ ೨೦೦೯ನೇ ಸಾಲಿನ ಸಂಶೋಧನೆಗಾಗಿ ಪುಸ್ತಕ ಬಹುಮಾನ ನೀಡಿ ಗೌರವಿಸಿದೆ. ‘ಯಕ್ಷಗಾನ ಆಹಾರ್ಯ’ ಕೃತಿಗೆ ೨೦೧೦ ಕೆರೆಮನೆ ಶಂಭು ಹೆಗಡೆ ಗ್ರಂಥ ಪ್ರಶಸ್ತಿ ಲಭಿಸಿದೆ. ಕನ...