ಡಾ. ಎನ್. ಜಗದೀಶ ಕೊಪ್ಪ
ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಕೊಪ್ಪ ಗ್ರಾಮದ ರೈತ ಕುಟುಂಬದಲ್ಲಿ ಜನನ (೧೯೫೬). ಬೆಸಗರಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಮತ್ತು ಪಿ.ಯು.ಸಿ. ವ್ಯಾಸಂಗ. ಬೆಂಗಳೂರು ವಿ.ವಿ. ಪುರಂ ಕಾಲೇಜಿನಲ್ಲಿ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ. `ಜಾಗತೀಕರಣ ಮತ್ತು ಗ್ರಾಮಭಾರತ’ ಅಧ್ಯಯನ ಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ.
೧೯೮೧ರಲ್ಲಿ ಪತ್ರಿಕೋದ್ಯಮಕ್ಕೆ ಪ್ರವೇಶ. ಕಳೆದ ಹದಿನೇಳು ವರ್ಷಗಳಿಂದ ಹುಬ್ಬಳ್ಳಿಯಲ್ಲಿರುವ ಉದಯ ಟಿ. ವಿ.ಯ ಉತ್ತರ ಕರ್ನಾಟಕ ಪ್ರಾದೇಶಿಕ ಕಛೇರಿಯ ಮುಖ್ಯಸ್ಥನಾಗಿ ಕಾರ್ಯ ನಿರ್ವಹಿಸಿ, ಸೇವೆಯಿಂದ ನಿವೃತ್ತಿಯಾಗಿ ಧಾರವಾಡದಲ್ಲಿ ವಾಸವಾಗಿದ್ದಾರೆ. ಕಾವ್ಯ, ತೌಲನಿಕ ಅಧ್ಯಯನ, ಇತಿಹಾಸ, ಜೀವನಚರಿತ್ರೆ ಮತ್ತು ಆತ್ಮಕತೆಗಳ ಅನುವಾದ ಹಾಗೂ ಪರಿಸರ ವಿಜ್ಞಾನ, ಕರ್ನಾಟಕ ಸಂಗೀತ ಮತ್ತು ನೃತ್ಯದ ಇತಿಹಾಸ ಸೇರಿದಂತೆ ವಿವಿಧ ವಿಷಯಗಳಲ್ಲಿ ಈವರೆಗೆ ಇಪ್ಪತ್ತಾರು ಕೃತಿಗಳನ್ನು ರಚಿಸಿದ್ದಾರೆ.
`ಜೀವನದಿಗಳ ಸಾವಿನ ಕಥನ’, ಕೃತಿಗೆ ಗುಲ್ಬರ್ಗದಲ್ಲಿ ಮಲ್ಲೇಪುರಂ ಪ್ರತಿಷ್ಠಾನದಿಂದ ಶ್ಯಾಮಸುಂದರ್ ಪುಸ್ತಕ ಪ್ರಶಸ್ತಿ, ಮಂಡ್ಯ ಜಿಲ್ಲೆಯ ಅಮೃತ ಮಹೋತ್ಸವದ ಗೌರವ ಪ್ರಶಸ್ತಿ ಹಾಗೂ `ಎಂದೂ ಮುಗಿಯದ ಯುದ್ಧ’ ಮತ್ತು `ಬಿಳಿಸಾಹೇಬನ ಭಾರತ’ ಕೃತಿಗಳಿಗೆ ೨೦೧೩ ಮತ್ತು ೨೦೧೪ರ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳಲ್ಲದೆ, ...