ರಾಘವೇಂದ್ರ ಪಾಟೀಲ :
ಜೀವಶಾಸ್ತ್ರದ ಪ್ರಾಧ್ಯಾಪಕರಾಗಿ, ಪ. ಪೂ. ಕಾಲೇಜೊಂದರ ಪ್ರಾಚಾರ್ಯರಾಗಿ, ಎನ್. ಸಿ. ಸಿ. ಆಫೀಸರ್ ಆಗಿ, ಆನಂದಕಂದ ಗ್ರಂಥಮಾಲೆಯ ಸ್ಥಾಪಕ ಸಂಪಾದಕರಾಗಿ, ಸಂವಾದ (ಅ)ನಿಯತಕಾಲಿಕೆಯ ನಿಯತ ಸಂಪಾದಕರಾಗಿ, ಕತೆಗಾರ-ಕಾದಂಬರಿಕಾರರಾಗಿ, ಸದಾ ತಮ್ಮನ್ನು ಒಂದಲ್ಲಾ ಒಂದು ಕಾರ್ಯದಲ್ಲಿ ತೊಡಗಿಸಿಕೊಂಡು, ಅತೃಪ್ತಿಯಿಂದ ಮತ್ತೆ ಮತ್ತೆ ಹೊಸ ದಾರಿಗಳನ್ನು, ಹೊಸ ತುದಿಗಳನ್ನು ಅರಸುತ್ತಿರುವ ವ್ಯಕ್ತಿಯೆಂದರೆ ಶ್ರೀ ರಾಘವೇಂದ್ರ ಪಾಟೀಲರು. ನೋವು-ಸಂಕಟ, ಹತಾಶೆ, ಶೋಧ, ಮತ್ತು ಪ್ರಯೋಗಶೀಲತೆ –ಇವು ಕತೆಗಾರ ಪಾಟೀಲರ ಪ್ರಾತಿನಿಧಿಕ ಲಕ್ಷಣಗಳು.
ಕತೆಗಾರರಾಗಿ ಪಾಟೀಲರು ಸಾಹಿತ್ಯಕ್ಷೇತ್ರವನ್ನು ಪ್ರವೇಶಿಸಿದುದು ೧೯೭೭ರಲ್ಲಿ –ಉದಯವಾಣಿ ದೀಪಾವಳಿ ಸಂಚಿಕೆಯಲ್ಲಿ ಪ್ರಕಟವಾದ (ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನವನ್ನು ಗಳಿಸಿದ) ‘ಒಡಪುಗಳು’ ಎಂಬ ಕಥೆಯಿಂದ. ಅಂದಿನಿಂದ ಇಲ್ಲಿಯವರೆಗೆ, ಪಾಟೀಲರ ಐದು ಕಥಾಸಂಕಲನಗಳು ಪ್ರಕಟವಾಗಿವೆ: ಒಡಪುಗಳು (೧೯೭೮), ಪ್ರತಿಮೆಗಳು (೧೯೮೨), ಬಾಳವ್ವನ ಕನಸುಗಳು (೧೯೮೪), ದೇಸಗತಿ (೧೯೯೫), ಮತ್ತು ಮಾಯಿಯ ಮುಖಗಳು (೧೯೯೮). ಈ ಸಂಕಲನಗಳಲ್ಲಿ ಬಂದ ಒಟ್ಟು ೨೭ ಕಥೆಗಳು ತುದಿಯೆಂಬೋ ತುದಿಯಿಲ ಎಂಬ ಹೆಸರಿನ ಸಂಕಲನದಲ್ಲಿ ೨೦೦೯ರಲ್ಲಿ ಪ್ರಕಟವಾದುವು. ಈ ಎಲ್ಲಾ ಕಥೆಗಳನ್ನೂ ಕಾಲಾನುಕ್ರಮವಾಗಿ ನೋಡಿದರೆ, ಪಾಟೀಲರು ನಿರೂಪಣೆ, ವಸ್ತು, ಮತ್ತು ಲೋಕದೃಷ್ಟಿ ಈ ಮೂರೂ ನೆಲೆಗಳಲ್ಲಿ ಸದಾ ಪ್ರಯೋಗಶೀಲರಾಗಿರುವುದು ಕಂಡು ಬರುತ್ತದೆ...