ಸತ್ಯಕಾಮ
ಸತ್ಯಕಾಮರ ನಿಜನಾಮ ಅನಂತಕೃಷ್ಣ ಶಹಪೂರ. ಇವರು ಹುಟ್ಟಿದ್ದು ಗಲಗಲಿಯಲ್ಲಿ. ತಂದೆ ಕೃಷ್ಣಾ ಹಾಗೂ ತಾಯಿ ರುಕ್ಮಿಣಿ. ಪ್ರಾಥಮಿಕದಿಂದ ಹೈಸ್ಕೂಲುವರೆಗೆ ಗಲಗಲಿಯಲ್ಲೇ ಶಿಕ್ಷಣ ಪಡೆದದ್ದು. ಹೈಸ್ಕೂಲಿಗೆ ಸೇರಿದ್ದು ಬಾಗಲಕೋಟೆ. ಆದರೆ ವಿದ್ಯೆಗೆ ಶರಣುಹೊಡೆದು ಊರಿಗೆ ವಾಪಸ್ಸು ಬಂದರು. ಎಳೆವೆಯಿಂದಲೇ ಬೆಳೆದು ಬಂದದ್ದು ನಾಟಕದ ಕಡೆ ಒಲವು.
ಕಟ್ಟಿದ್ದು “ಜೀವನ ನಾಟ್ಯ ವಿಲಾಸಿ ಮಂಡಲ.” ಹಲವಾರು ನಾಟಕಗಳ ಪ್ರಯೋಗ. ದೇಶದಲ್ಲೆಲ್ಲಾ ವ್ಯಾಪಿಸಿದ್ದ ಸ್ವಾತಂತ್ರ್ಯದ ಕಾವಿಗೆ ಬಲಿಯಾಗಿ, ಚಳವಳಿಗೆ ಧುಮುಕಿದರು. ೧೯೪೨ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಇವರ ನೇತಾರರು ಕಾಖಂಡಕಿ ರಾಮಾಚಾರ್ಯರು, ತ್ರ್ಯಂಬಕ ದೇಶಪಾಂಡೆ, ಬುರ್ಲಿ ಬಿಂದುಮಾಧವರಾಯರು. ನೇತಾರರ ಮಾತಿನ ಮೋಡಿಗೆ ಒಳಗಾದರು. ಚಳವಳಿಗಾರರ ಬೆನ್ನು ಹತ್ತಿ ಹೋಗಿ ಆಪಾದನೆಗೊಳಗಾಗಿ ತಲೆಮರೆಸಿಕೊಂಡು ಓಡಾಟ ಕೆಲಕಾಲ. ಆದರೂ ಬಂಧನಕ್ಕೊಳಗಾಗಿ ಅನುಭವಿಸಿದ್ದು ಜೈಲುಶಿಕ್ಷೆ.
ಸ್ಕೂಲು ಕಾಲೇಜಿನಿಂದ ಕಲಿಯುವುದಕ್ಕಿಂತ ಜೀವನ ರಂಗದಲ್ಲಿ ಕಲಿತದ್ದೇ ಜಾಸ್ತಿ. ಸ್ವಪ್ರಯತ್ನದಿಂದ ಗಳಿಸಿದ್ದು ಅಪಾರ ಜ್ಞಾನ ಸಂಪತ್ತು. ಉಡುಪಿಯಲ್ಲಿ ಅನಂತ ಪದ್ಮನಾಭ ಎಂಬ ಹೆಸರಿನಿಂದ ಕಲಿತದ್ದು ಸಂಸ್ಕೃತ. ಒಂದೆಡೆ ನಿಲ್ಲದ, ಕೂಡದ ಮನಸ್ಸು, ವಯಸ್ಸು. ದೇಶ ಸಂಚಾರದ ಚಕ್ರವನ್ನು ಕಾಲಿಗೆ ಕಟ್ಟಿಕೊಂಡು ಸುತ್ತಿದ್ದು ಇಡೀ ಭಾರತ.
ನಾಟಕ, ಕವಿತೆ, ಕಾದಂಬರಿಗಳ ರಚನೆಯಲ್ಲಿ ಎಳೆವೆಯಿಂದಲೇ ತೊಡಗಿಸಿಕೊಂಡಿದ್ದ...