ಡಾ. ಶಿವಾನಂದ ಎಚ್. ಬಂಟನೂರ
ಸಮಕಾಲೀನ ಶಿಲ್ಪಕಲೆಯ ಸೃಜನಶೀಲ ಕೊಡುಗೆಗಳಿಗೆ ಕಾರಣರಾದ ಬಹುಮುಖ್ಯ ಪ್ರತಿಭೆಗಳಲ್ಲಿ ಒಬ್ಬರು ಶಿವಾನಂದ ಬಂಟನೂರ್. ಸುತ್ತಲಿನ ಆಗುಹೋಗುಗಳ ಆಳದ ದರ್ಶನದಂತಹ ಹಲವು ಶಿಲ್ಪಸೃಷ್ಟಿಗಳು ಇವರಿಂದ ಮೂಡಿಬಂದಿವೆ. ಉಸಿರು ಗಟ್ಟಿಸುವ ಸಂದರ್ಭಗಳ ಸೃಷ್ಟಿಶೀಲತೆ ವಿಕೃತಿ ಸೌಂದರ್ಯ ಮೀಮಾಂಸೆಗೆ ಉತ್ತಮ ಉದಾಹರಣೆ ಯಂತೆ ಕಾಣಿಸಿಕೊಂಡಿವೆ. ಕಲ್ಲು, ಮರ, ಲೋಹದಂತಹ ಹಲವು ಮಾಧ್ಯಮಗಳಲ್ಲಿ ಬಿಡಿಬಿಡಿಯಾಗಿ, ಮಿಶ್ರಮಾಧ್ಯಮದಲ್ಲಿ ಇಡಿಯಾಗಿ ರೂಪುಗೊಂಡಿವೆ. ಐತಿಹಾಸಿಕ ಪ್ರಜ್ಞೆಯ ಜತೆಜತೆಗೆ ಸಮಕಾಲೀನ ಪ್ರಜ್ಞೆಯನ್ನು ಅರಗಿಸಿಕೊಂಡ, ಸಮಾಜವನ್ನು ನಿರಚಿಸಿದ (ಡಿಕನ್ ಸ್ಟ್ರಕ್ ಟೆಡ್ ) ಸೃಷ್ಟಿಗಳು ಇವರವು.
ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಹಾಗೂ ಜನಪದ ಶಿಲ್ಪಕಲೆಯಲ್ಲಿ ಪಿಹೆಚ್.ಡಿ. ಪದವಿ ಪಡೆದಿರುವರು. ದೃಶ್ಯಕಲೆ ಮತ್ತು ಕಲಾವಿದರ ಕುರಿತು ಆರು ಪುಸ್ತಕಗಳನ್ನು, ಹಲವಾರು ಲೇಖನಗಳನ್ನು ಪ್ರಕಟಿಸಿರುವರು.