ಶ್ರುತಿ ಬಿ.ಎಸ್.
ಜನವರಿ ೨೮, ೧೯೯೧ ರಲ್ಲಿ ಜನಿಸಿದ ಶ್ರುತಿಯವರ ಊರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಬಾಣಿಗ ಗ್ರಾಮ. ಮೂಲತಃ ಹರಿದ್ರಾವತಿ ಮನೆತನಕ್ಕೆ ಸೇರಿದ ಶ್ರೀಪಾದರಾವ್ ಮತ್ತು ಸೀಮಾ ಅವರ ಜೇಷ್ಠ ಪುತ್ರಿಯಾದ ಇವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ತಮ್ಮ ಹುಟ್ಟೂರಿನಲ್ಲಿಯೇ ಪಡೆದರು. ನಂತರ ಪಿ.ಯು.ಸಿ.ಯನ್ನು ವಿಜ್ಞಾನ ವಿಷಯದಲ್ಲಿ ಹೊಂಗಿರಣ ಇಂಡಿಪೆಂಡೆಂಟ್ ಪಿ.ಯು. ಕಾಲೇಜ್, ಅಮಟೆಕೊಪ್ಪ, ಸಾಗರದಲ್ಲಿ ಮುಗಿಸಿದರು. ಬಳಿಕ ಶಿವಮೊಗ್ಗ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಡಿಪ್ಲಮೋಗೆ ಸೇರ್ಪಡೆಯಾಗಿ ನಾಲ್ಕು ತಿಂಗಳುಗಳಾಗುವ ಮುನ್ನವೇ ಕ್ಯಾನ್ಸರ್ ಗೆ ತುತ್ತಾಗಿ, ವಿದ್ಯಾಭ್ಯಾಸವನ್ನು ತೊರೆದು ಚಿಕಿತ್ಸೆಗಾಗಿ ಮಣಿಪಾಲ್ ಗೆ ತೆರಳಬೇಕಾಯಿತು. ಕ್ಯಾನ್ಸರ್ ನಿಂದ ಗುಣಮುಖವಾಗಿ ಬಂದ ನಂತರ ೨೦೧೦-೧೧ರಲ್ಲಿ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಿಂದ ಬಿ.ಎ. ತೆಗೆದುಕೊಂಡು ತಮ್ಮ ವಿದ್ಯಾಭ್ಯಾಸ ಮುಂದುವರೆಸಿದರು. ಈ ಮಧ್ಯೆ ಸುಮಾರು ೫ ತಿಂಗಳುಗಳ ಕಾಲ ಸ.ಕಿ.ಪ್ರಾ.ಶಾಲೆ ಹಳೇಬಾಣಿಗಾದಲ್ಲಿ ತಾತ್ಕಾಲಿಕ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದರು. ಪ್ರಸ್ತುತ ಬಿ.ಎ. ಮುಗಿಸಿ ಸೈಕಾಲಜಿಯಲ್ಲಿ ಎಂ.ಎಸ್ಸಿ., ಓದುತ್ತಿದ್ದಾರೆ. “ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೋಮಾ...” ಇವರ ಮೊದಲ ಪುಸ್ತಕ.