ಶ್ರೀ ಟಿ. ಪಿ. ಅಶೋಕ
ಇವರು ಕಳೆದ ಮೂರು ದಶಕಗಳಿಂದಲೂ ಕನ್ನಡ ಸಾಹಿತ್ಯದ ಕೃಷಿ ಮಾಡುತ್ತಲೇ ಬಂದಿದ್ದಾರೆ. ಅವರು ಸಾಗರದ ಲಾಲಬಹದ್ದೂರ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವಾಗಲೇ ಕನ್ನಡ ಸಾಹಿತ್ಯ ಸೇವೆಯನ್ನು ಸಲ್ಲಿಸುತ್ತಿದ್ದರು. ಕೆ. ವಿ. ಸುಬ್ಬಣ್ಣ ಅವರು ಹೆಗ್ಗೋಡಿನಲ್ಲಿ ನಡೆಸುತ್ತಿದ್ದ ಸಾಂಸ್ಕೃತಿಕ ಶಿಬಿರದಲ್ಲಿ ಟಿ. ಪಿ. ಅಶೋಕರದ್ದು ಅಗೋಚರ ಅಸ್ತಿತ್ವ, ನಿರಂತರವಾಗಿ ಸಾಹಿತ್ಯದ ಪುನರುಜ್ಜೀವನ ಕಾರ್ಯ ಕೈಗೊಂಡಿರುವ ಅಶೋಕರು ತಮ್ಮ ಅಂಕಣ ಬರಹದಿಂದ ಅನೇಕರಿಗೆ ಸಾಹಿತ್ಯದ ಒಳ್ಳೆಯ ಅಭಿರುಚಿಯನ್ನು ಬಿತ್ತಿದ್ದಾರೆ.
ನಿವೃತ್ತರಾದ ಮೇಲೂ ಅಧ್ಯಾಪಕ ವೃತ್ತಿಗೆ ವಿದಾಯ ಹೇಳಿದ ಮೇಲೆ ಸಾಹಿತ್ಯದ ಪ್ರವೃತ್ತಿಗೆ ಪೂರ್ತಿಯಾಗಿ ತೊಡಗಿಸಿಕೊಂಡಿದ್ದಾರೆ.
ಈಗಾಗಲೇ ಅಂಕಣ ಬರಹಗಳನ್ನು ವಿಭಾಗಿಸಿ `ಕಾವ್ಯಪ್ರೀತಿ' ಮತ್ತು `ಕಥನ ಪ್ರೀತಿ' ಎಂಬ ಎರಡು ಪುಸ್ತಕಗಳು ಹೊರಬಂದಿವೆ. ಅಷ್ಟಾಗಿಯೂ ಅವರ `ಕಥೆಗಳ ಅಂಕಣ ಬರಹಗಳು' ಇನ್ನೂ ಉಳಿದಿದ್ದರಿಂದ ಅವನ್ನು ಈಗ `ಕಥನ ಕಾರಣ' ಎಂಬ ಹೆಸರಿನಿಂದ ಹೊರ ತರುತ್ತಿದ್ದೇವೆ. ಈ ಪುಸ್ತಕದಲ್ಲಿ ೭೦ ಲೇಖನಗಳಿವೆ. ಇವು ಪತ್ರಿಕೆಯ ಸಾಪ್ತಾಹಿಕದಲ್ಲಿ ಓದಿ ಮರೆಯುವ ಲೇಖನಗಳಲ್ಲ . ಆಗಾಗ ಮತ್ತೆ ಮತ್ತೆ ಓದಿ ಮಥನ ಮಾಡಿಕೊಳ್ಳಬೇಕಾದ ಲೇಖನಗಳು.